೧೮೯೦ರಲ್ಲಿ ನಾನು ಕಲ್ಕತ್ತೆಯ ರಿಪನ್ ಕಾಲೇಜಿನಲ್ಲಿ ಓದುತ್ತಿದ್ದೆ. ಆ ಸಂದರ್ಭದಲ್ಲಿ ಶ್ರೀರಾಮಕೃಷ್ಣರ ನಿಕಟ ಭಕ್ತರಾದ ಮಾಸ್ಟರ್ ಮಹಾಶಯ (ಮಹೇಂದ್ರನಾಥ ಗುಪ್ತ)ರ ನಿರ್ದೇಶದಂತೆ ಬಾರಾನಗರ್ ಮಠಕ್ಕೆ ಹೋಗಿ ಶ್ರೀರಾಮಕೃಷ್ಣರ ಸಂನ್ಯಾಸಿ ಶಿಷ್ಯರ ಸಂಪರ್ಕವನ್ನು ಪಡೆದೆ. ಅವರ ಪ್ರೀತಿ ಮತ್ತು ತ್ಯಾಗಜೀವನದಿಂದ ಆಕರ್ಷಿತನಾಗಿ ಮತ್ತೆ ಮತ್ತೆ ಬಾರಾನಗರ್ ಮಠಕ್ಕೆ ಹೋಗುತ್ತಿದ್ದೆ. ಸ್ವಾಮಿ ವಿವೇಕಾನಂದರು ಆಗ ಮಠದಲ್ಲಿರಲಿಲ್ಲ, ಯಾತ್ರೆಗೆ ಹೋಗಿದ್ದರು, ಅವರು ಸಂಪೂರ್ಣ ಏಕಾಕಿಯಾಗಿರಬೇಕೆಂದು ಬಯಸಿದ್ದರು. ಮಠಕ್ಕೆ ಪತ್ರವನ್ನೂ ಬರೆಯುತ್ತಿರಲಿಲ್ಲ. ಒಂದೆರಡು ವರ್ಷ ಅವರು ಎಲ್ಲಿರುವರೆಂದು ಯಾರಿಗೂ ಗೊತ್ತಿರಲಿಲ್ಲ.

ಅನೇಕ ವರ್ಷಗಳ ಹಿಂದಿನ ಮಾತು (ಬಹುಶ: ೧೮೮೭ರಲ್ಲಿ, ನಾನಾಗ ಮೆಟ್ರೋಪಾಲಿಟನ್ ಸ್ಕೂಲಿನಲ್ಲಿ ಓದುತ್ತಿದ್ದೆ. ಆಗ ಸ್ವಾಮೀಜಿ ಅಲ್ಲಿ ಕೆಲವು ವಾರಗಳು ಮುಖ್ಯೋಪಾಧ್ಯಾಯರಾಗಿದ್ದರು ಆ ಸಂದರ್ಭದಲ್ಲಿ ನಾನವರನ್ನು ನೋಡಿದ್ದೆ. ನಾನು ಕೆಳಗಿನ ತರಗತಿಯವನಾಗಿದ್ದುದರಿಂದ ಅವರ ಪಾಠವನ್ನು ಕೇಳುವ ಅವಕಾಶ ನನಗೆ ದೊರೆಯಲಿಲ್ಲ, ನಾನು ನನ್ನ ಕ್ಲಾಸ್‌ರೂಂ ಕಿಟಕಿಯಿಂದ ಅವರು ಸ್ಕೂಲಿಗೆ ಬರುವುದನ್ನು ಪ್ರತಿದಿನ ನೋಡುತ್ತಿದ್ದೆ. ಆ ದೃಶ್ಯ ನನ್ನಗಿನ್ನೂ ಕಣ್ಣಿಗೆ ಕಟ್ಟಿದಂತೆ ಇದೆ. ಅವರು ಪೈಜಾಮ, ನೀಳವಾದ ಅಂಗಿ) ಮತ್ತು ಬಿಳಿ ಛಾದರ್ ಧಸಿದ್ದರು. ಒಂದು ಕೈಯಲ್ಲಿ ಪುಸ್ತಕ ಮತ್ತೊಂದರಲ್ಲಿ ಕೊಡೆ. ಹೊಳೆಯುವ ಕಣ್ಣುಗಳು, ಮುಖದಲ್ಲಿ ಮಂದಹಾಸ. ಅವರು ತುಂಬ ಅಂತರ್ಮುಖಿಗಳಾಗಿರುವಂತೆ ಕಾಣುತ್ತಿದ್ದರು. ಕೆಲವರು ಅವರ ಮೋಹಕ ವ್ಯಕ್ತಿತ್ವಕ್ಕೆ ಆಕರ್ಷಿತರಾಗುವಂತಿದ್ದರೆ ಮತ್ತೆ ಕೆಲವರು ಅವರ ತೀವ್ರ ಗಾಂಭೀರ್ಯವನ್ನು ಕಂಡು ಅವರ ಹತ್ತಿರ ಹೋಗುವುದಕ್ಕೂ ಹೆದರುವಂತಿತ್ತು. ನಾನು ಬಾರಾನಗರ ಮಠಕ್ಕೆ ಬಂದಮೇಲೆ ಗೊತ್ತಾದದ್ದು ನನ್ನ ಮೇಲೆ ಪ್ರಭಾವ ಬೀರಿದ ಆ ಶ್ರೇಷ್ಠ ಮುಖ್ಯೋಪಾಧ್ಯಾಯರೇ ಸ್ವಾಮೀಜಿ ಎಂದು.

ಸ್ವಾಮೀಜಿ ಅಮೆರಿಕಾದಿಂದ ಹಿಂದಿರುಗಿದ್ದು ಡಿಸೆಂಬರ್ – ೧೮೯೬ರಲ್ಲಿ, ಅವರು ಕೊಲ್ಕತಾಗೆ ಬಂದದ್ದು ಫೆಬ್ರವರಿ ೧೮೯೭ರಲ್ಲಿ. ನಾನಾಗ ಕೊಲ್ಕತಾದಿಂದ ಇಪ್ಪತ್ತು ಮೈಲಿ ದೂರದ ಹಳ್ಳಿಯೊಂದರಲ್ಲಿ – ಪ್ರೌಢಶಾಲೆಯ ಉಪಾಧ್ಯಾಯನಾಗಿದ್ದೆ. ಆಗ ಶ್ರೀರಾಮಕೃಷ್ಟರ ಜನ್ಮೋತ್ಸವ ದಕ್ಷಿಣೇಶ್ವರದಲ್ಲಿ ನೆರವೇರಿತು. ಬರುವ ಭಾನುವಾರ ಸಾರ್ವಜನಿಕ ಉತ್ಸವ. ನಾನು ಉತ್ಸವದ ಹಿಂದಿನ ದಿನ ಹೋಗಿದ್ದೆ. ಸ್ವಾಮೀಜಿ ಆಗ ಗಂಗಾನದಿಯ ದಡದ ಒಂದು ಮನೆಯಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದರು. ಭಾನುವಾರ ಮುಂಜಾನೆ ಅವರನ್ನು ನೋಡಲು ನಾನು ಅಲ್ಲಿಗೆ ಹೋದೆ. ಆಗಿನ್ನೂ ಆರು ಗಂಟೆ -ಇನ್ನೂ ಕತ್ತಲೆಯಿತ್ತು. ಕಿಟಕಿಯ ಮೂಲಕ ನಾನು ಬರುತ್ತಿರುವುದನ್ನು ಕಂಡು ಸ್ವಾಮೀಜಿ ಕೆಳಗೆ ಬಂದು ಬಾಗಿಲು ತೆಗೆದರು. ನಾನು ಪ್ರಣಾಮ ಮಾಡಿದೆ. ಮೊದಲೇ ನನ್ನ ಪರಿಚಯವಿರುವವರಂತೆ ಬಹಳ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡರು ನನ್ನ ಹತ್ತಿರ ತುಂಬ ಸಲಿಗೆಯಿಂದ ಮಾತನಾಡಿ ಒಂದು ಲೋಟ ನೀರು ತರಲು ಹೇಳಿದರು. ಅವರಾಗ ಬಾಯಿ ತೊಳೆಯುತ್ತಿದ್ದರು. ನಾನು ಒಂದು ಪರೀಕ್ಷೆಗೆ ಸಿದ್ದನಾಗುತ್ತಿರುವೆನೆಂದು ತಿಳಿದಾಗ ಸ್ವಾಮೀಜಿ ಬಹಳ ಸಂತೋಷದಿಂದ ನನ್ನನ್ನು ಆಶೀರ್ವದಿಸಿದರು. ಮಹಾಪುರುಷ್ ಜೀ (ಸ್ವಾಮಿ ಶಿವಾನಂದರು) ಅಲ್ಲಿಯೇ ಇದ್ದರು. ಅವರು ನಾನು ಅನೇಕ ವರ್ಷಗಳಿಂದ ಮಠಕ್ಕೆ ಬರುತ್ತಿರುವುದಾಗಿಯೂ ನನಗೆ ಮಠ ಸೇರುವ ಆಸೆ ಇರುವುದಾಗಿಯೂ ಸ್ವಾಮೀಜಿಗೆ ಹೇಳಿದರು. ಇದನ್ನು ಕೇಳಿ ನನಗೆ ಸಂನ್ಯಾಸದೀಕ್ಷೆ ಕೊಡುವುದಾಗಿ ಸ್ವಾಮೀಜಿ ಹೇಳಿದರು. ನನಗೆ ಸ್ವರ್ಗವೇ ಸಿಕ್ಕಿದಂತಾಯಿತು.

ಸಾರ್ವಜನಿಕ ಉತ್ಸವಕ್ಕೆ ಕೆಲವು ದಿನಗಳ ಮುಂಚೆ-ಬಹುಶಃ ಶ್ರೀರಾಮಕೃಷ್ಣರ ನಿಜವಾದ ಜನೋತ್ಸವದ ದಿನ-ಸ್ವಾಮೀಜಿ ನಾಲ್ಕು ಜನ ಬ್ರಹ್ಮಚಾರಿಗಳಿಗೆ ಸಂನ್ಯಾಸ ದೀಕ್ಷೆಯಿತ್ತಿದ್ದರು ಮತ್ತು ಇಬ್ಬರು ಭಕ್ತರಿಗೆ ಮಂತ್ರದೀಕ್ಷೆಯಿತ್ತಿದ್ದರು. ಸುಮಾರು ಎಂಟು ಗಂಟೆಯ ಹೊತ್ತಿಗೆ ಅವರು ಮಠಕ್ಕೆ ಬಂದರು. ನಾನೂ ಅವರ ಅನುಮತಿಯನ್ನು ಪಡೆದು ಅವರೊಟ್ಟಿಗೆ ಅದೇ ಗಾಡಿಯಲ್ಲಿ ಮಠಕ್ಕೆ ಬಂದೆ. ಸ್ವಲ್ಪ ಹೊತ್ತಿನ ನಂತರ ಅವರು ಸ್ನಾನ ಮಾಡಿ ದೇವರ ಕೋಣೆಯಲ್ಲಿ ಧ್ಯಾನಕ್ಕೆ ಹೋದರು. ನಾವೂ ಅವರನ್ನು ಅನುಸರಿಸಿದೆವು. ಆ ಸಂದರ್ಭ ಅತ್ಯಂತ ಸ್ಫೂರ್ತಿದಾಯಕವಾಗಿತ್ತು.

ಹನ್ನೊಂದು ಗಂಟೆಯ ಹೊತ್ತಿಗೆ ಸಾರ್ವಜನಿಕ ಉತ್ಸವದ ಸ್ಥಳವಾದ ದಕ್ಷಿಣೇಶ್ವರಕ್ಕೆ ಹೋದರು. ಅಲ್ಲಿ ಜನವೇ ಜನ. ಸ್ವಾಮೀಜಿಯವರು ಬರುತ್ತಾರೆಂದು ಅದು ಮತ್ತೂ ಜನನಿಬಿಡವಾಗಿತ್ತು. ಅನೇಕರು ಪಂಚವಟಿಯಲ್ಲಿ ಒಂದು ಭಾಷಣ ಮಾಡಬೇಕೆಂದು ಅವರನ್ನು ಕೇಳಿಕೊಂಡರು. ಆ ಜನರ ಗಲಾಟೆಯಲ್ಲಿ ಭಾಷಣ ಅಸಾಧ್ಯವೆನಿಸಿತು ಅವರಿಗೆ. ಮಧ್ಯಾಹ್ನ ಒಂದು ಗಂಟೆಗೆ ಮಠಕ್ಕೆ ಹಿಂದಿರುಗಿದರು. ನಾನು ಆ ದಿನವೆಲ್ಲ ಅವರೊಡನಿದ್ದೆ, ಮತ್ತು ಸ್ವಲ್ಪ ಅವರ ಸೇವೆ ಮಾಡುವ ಅವಕಾಶವೂ ಸಿಕ್ಕಿತು, ಅದು ನನ್ನ ಜೀವನದಲ್ಲಿ ಅತ್ಯಂತ ವೈಭವಯುತ ದಿನ. ಅದರ ಪ್ರಭಾವ ನನ್ನ ಸ್ಮೃತಿಯಲ್ಲಿ ಅಚ್ಚಳಿಯದೆ ಉಳಿದಿದೆ. ಈಗಲೂ ನಾನದನ್ನು ನೆನೆಸಿಕೊಂಡಾಗ ಆನಂದದಿಂದ ಪುಲಕಿತನಾಗುವೆ.

ಮರುದಿನ ಮನಸ್ಸಿಲ್ಲದ ಮನಸ್ಸಿನಿಂದ ಶಾಲೆಗೆ ಹೋದೆ. ಕೃತಜ್ಞತಾಭಾವ ಮತ್ತು ಆ ಅಪೂರ್ವ ಅನುಭವದ ಪರಮೋತ್ಕರ್ಷತೆ ಅನೇಕ ದಿನಗಳವರೆಗೆ ಉಳಿಯಿತು. ಮತ್ತೆ ಸ್ವಾಮೀಜಿಯವರನ್ನು ನೋಡಬೇಕು, ಅವರ ಪಾದದಡಿ-ಕುಳಿತುಕೊಳ್ಳಬೇಕು ಎಂದು ಮನಸ್ಸು ಹಾತೊರೆಯುತ್ತಿತ್ತು.

(ಮೂಲ: ವಿವೇಕ ಪ್ರಭ ಜನವರಿ 2003)                                                                               (ಸ್ವಾಮಿ ವಿವೇಕಾನಂದ ದಿವ್ಯಸ್ಮೃತಿ ಗ್ರಂಥದಿಂದ)