೧೮೯೮ರ ಏಪ್ರಿಲ್, ಕಲ್ಕತ್ತೆಯನ್ನು ಪ್ಲೇಗ್ ರೋಗ ಆಕ್ರಮಿಸಿತ್ತು. ಹಿಂದೆಯೂ ಅನೇಕ ಬಾರಿ ಈ ಮಾರಿ ಜನರನ್ನು ಕಾಡಿಸಿ ಪೀಡಿಸಿ, ಸಾವು ನಿತ್ಯಸತ್ಯವಷ್ಟೇ ಅಲ್ಲ, ಕ್ಷಣಕ್ಷಣದ ಸತ್ಯ ಎಂದು ತೋರಿಸಿತ್ತು. ಜನರೆಲ್ಲ ಭಯದಿಂದ ವಿಭ್ರಾಂತರಾಗಿ, ಸಾಯುತ್ತಿರುವ ತಮ್ಮ ಪ್ರೀತಿಯ ಸಂಬಂಧಿಕರನ್ನು ತೊರೆದು ವಲಸೆ ಹೊರಟರು. ಆಗಲೆ ಎಷ್ಟೋ ಜನ ಸತ್ತಿದ್ದರು. ಸರಕಾರವು ಇಷ್ಟು ದೊಡ್ಡ ಅನಾಹುತಕ್ಕೆ ತಯಾರಿರಲಿಲ್ಲ. ಸೈನ್ಯವು ನಗರವನ್ನು ವಶಪಡಿಸಿಕೊಂಡು ಸ್ವಚ್ಛತೆಯನ್ನು ಕಾಪಾಡಲು ಪ್ರಯತ್ನಿಸುತ್ತಿತ್ತು. ಆದರೇನು? ಸಾಮ್ರಾಜ್ಯದ ರಾಜಧಾನಿಯಾದ ಈ ದೊಡ್ಡ ನಗರ ಸತ್ತವರ ಹೆಣಗಳಿಂದ, ಕಸದಿಂದ ತುಂಬಿಹೋಗಿ ಅತ್ಯಂತ ಭೀಕರವಾಗಿ ಕಾಣಿಸುತ್ತಿತ್ತು. ಸರ್ಕಾರವು ಹಲವಾರು ವಿಧಿ ನಿಷೇಧಗಳನ್ನು ಬೇರೆ ಹೇರಿತು. ಗೊಂದಲ ಮತ್ತಷ್ಟು ತೀವ್ರಗೊಂಡು ಜನ ಅಸಹನೀಯ ದುಃಖಕ್ಕೆ ಒಳಗಾದರು.

ಇಂತಹ ಸನ್ನಿವೇಶದಲ್ಲಿ ಒಂದು ದಿನ ಬೆಳಗಿನಲ್ಲಿ ಇದ್ದಕ್ಕಿದ್ದಂತೆ ಕೆಲವು ಸಂನ್ಯಾಸಿಗಳು ಹಾಗೂ ಸ್ವಯಂಸೇವಕರು ಕೈಯಲ್ಲಿ ಕಸಪೊರಕೆಯನ್ನು ಹಿಡಿದು ರಸ್ತೆಗಳನ್ನು ಶುಭ್ರಗೊಳಿಸಲು ಪ್ರಾರಂಭಿಸಿದರು. ಮತ್ತೆ ಕೆಲವರು ಕೊಳೆತುನಾರುತ್ತಿದ್ದ ಶವಗಳನ್ನು ಸುಡುವುದರಲ್ಲಿ ಮುಂದಾದರು. ಇನ್ನೂ ಕೆಲವರು ಸಾಯುತ್ತಿರುವವರಿಗೆ ಶುಶ್ರೂಷೆ ಮಾಡಿದರು. ಇಂತಹ ವಿಸ್ಮಯವನ್ನು ಕಂಡು ಜನ ಬೆರಗಾದರು. ಸಂನ್ಯಾಸಿಗಳು ಸಾಧನೆ, ಪರಲೋಕ ಪ್ರಾಪ್ತಿ, ಮೋಕ್ಷಗಳನ್ನು ಬಿಟ್ಟು, ರಸ್ತೆಗಿಳಿದು ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದೆಂದರೇನು ? ಯಾರಿವರು? ಏನನ್ನೂ ಬಯಸದೆ, ಪ್ರೀತಿಯ ಮಾತುಗಳಿಂದ, ನಿಷ್ಠೆಯಿಂದ ಕೆಲಸ ಮಾಡುತ್ತಿದ ಇವರೆಲ್ಲ ಯಾವ ಸಂಪ್ರದಾಯದವರು? ಇಂತಹ ಅನೇಕ ಪ್ರಶ್ನೆಗಳೊಂದಿಗೆ ಹಿಂದುಗಳ ಆಚರಣೆಯಲ್ಲಿ ನೂತನವಾಗಿ ಪ್ರದರ್ಶಿಸಲ್ಪಡುತ್ತಿದ್ದ ಈ ಸೇವಾಭಾವವನ್ನು ಜನ ಮೆಚ್ಚಿದರು.

ಸಹಾಯ ಎಂಬ ಭಾವನೆಯೇ ದೇವರ ಭಾವನೆಗೆ ಎಡೆ ಮಾಡಿ ಕೊಟ್ಟಿತು. ಸಹಾಯ ಎಂಬ ಭಾವನೆಗಳ ಮೊತ್ತವೇ ದೇವರು. ಈ ಪ್ರಪಂಚದಲ್ಲಿರುವ ಎಲ್ಲಾ ಕರುಣೆ, ಒಳ್ಳೆಯತನ ಸಹಾಯ ಎಂಬ ಭಾವನೆಗಳ ಸಾರವೇ ದೇವರು.  – ಸ್ವಾಮಿ ವಿವೇಕಾನಂದ

ಸಕಲ ಜೀವಿಗಳಲ್ಲೂ ಶಿವನೇ ಇದ್ದಾನೆ

ಹೌದು, ಜಗತ್ತು ವೇದಾಂತದ ಒಂದು ಹೊಸ ವ್ಯಾಖ್ಯಾನವನ್ನು ದರ್ಶಿಸಿತು. ಇಲ್ಲಿಯತನಕ ವೇದಾಂತವೆಂದರೆ ಈ ಜಗತ್ತು ಮಿಥ್ಯೆ, ಈ ಮಿಥ್ಯೆಯ ಹಿಂದಿರುವ ಆ ನಿತ್ಯಸತ್ಯ ಪರಬ್ರಹ್ಮವನ್ನು ವಿಚಾರದ ಮೂಲಕ ತಿಳಿದು ಸಮಾಧಿಯಲ್ಲಿ ಬ್ರಹ್ಮಸಾಕ್ಷಾತ್ಕಾರ ಮಾಡಿಕೊಂಡು ಜೀವನ್ಮುಕ್ತನಾಗುವುದೇ ಮಾರ್ಗ ಎಂದು ಜನರು ತಿಳಿದಿದ್ದರು.ಕೆಲವು ಆಚಾರ್ಯರೂ ತಮ್ಮ ಭಾಷ್ಯಗಳಲ್ಲಿ ಇದನ್ನೇ ಹೇಳಿದ್ದರು. ಕೆಲಸವು ಬಂಧನಕ್ಕೆ ಕಾರಣವಾಗುತ್ತದೆ, ಆದ್ದರಿಂದ ಕರ್ಮವಿಮುಖವಾಗಿ ತತ್ತ್ವಚಿಂತನೆಯನ್ನೇ ಮಾಡಬೇಕು ಎಂದು ಉಪನಿಷತ್ತುಗಳಿಗೆ ಕೆಲವರು ವ್ಯಾಖ್ಯಾನ ಮಾಡಿದ್ದರು. ಆದರೆ ಈಗ ಈ ಸಂನ್ಯಾಸಿಗಳು ಸ್ವಾಮಿ ವಿವೇಕಾನಂದರು ನೀಡಿದ ಆದೇಶದಂತೆ ಸೇವೆಯಲ್ಲಿ ತೊಡಗಿದ್ದರು. ಅನಾದಿ ಕಾಲದಿಂದ ಬಂದಿರುವ ಋಷಿವಾಣಿ, ಸನಾತನ ಧರ್ಮದ, ವೇದಾಂತದ ಸತ್ಯವು ಅನುಷ್ಟೇಯ ಎಂದು ತಮ್ಮ ಪ್ರವಚನಗಳಲ್ಲಿ ಎಲ್ಲೆಡೆ ಸಾರಿದ್ದ ಸ್ವಾಮೀಜಿ ಈಗ ಅದನ್ನು ಅನುಷ್ಠಾನದ ಮೂಲಕ ತೋರಿಸಿಕೊಡುತ್ತಿದ್ದರು. ‘ಶಿವಜ್ಞಾನೇ ಜೀವಸೇವಾ’ ಎಂಬ ಮಂತ್ರವನ್ನು ಸ್ವಾಮೀಜಿ ವೇದಾಂತದ ಹೊಸ ಸೂತ್ರವಾಗಿ ನೀಡಿದರು. “ಬ್ರಹ್ಮನಿಂದ ಹಿಡಿದು ಕೀಟ, ಪರಮಾಣುವಿನವರೆಗೆ ಎಲ್ಲ ಭೂತಗಳಲ್ಲಿಯೂ ಪ್ರೇಮಮಯನಾಗಿರುವ ಬ್ರಹ್ಮನಿರುವನು. ನಿನ್ನ ಮನ ಪ್ರಾಣ ಶರೀರಗಳನ್ನು ಅವುಗಳ ಅಡಿಯಲ್ಲಿ ಅರ್ಪಿಸು. ನಿನ್ನ ಮುಂದಿರುವ ಅನಂತ ರೂಪಗಳು ಇವು. ಇವುಗಳನ್ನು ಬಿಟ್ಟು ನೀನೆಲ್ಲಿ ಈಶ್ವರನನ್ನು ಅರಸುವೆ’ ಯಾರು ಜೀವಿಗಳನ್ನು ಪ್ರೀತಿಸುವರೋ ಅವರು ಈಶ್ವರನನ್ನು ಆರಾಧಿಸುವರು”, ಎನ್ನುತ್ತಾರೆ ಸ್ವಾಮಿ ವಿವೇಕಾನಂದರು, ‘ಸಖನನ್ನು ಕುರಿತು’ ಎಂಬ ತಮ್ಮ ಕವನದಲ್ಲಿ.

ಯಾವುದೇ ಭೇದವೆಣಿಸದೆ ಪ್ರತಿಯೊಬ್ಬರಲ್ಲೂ ಆ ಭಗವಂತನನ್ನು ಕಾಣುವ ಪ್ರಯತ್ನ ಮಾಡಿದಾಗ ಅದು ಮುಕ್ತಿಗೆ ಸಾಧನವಾಗುತ್ತದೆ ಎನ್ನುವ ಸ್ವಾಮೀಜಿ, “ಜೀವಸೇವೆಗಿಂತ ಮತ್ತೊಂದು ಧರ್ಮವಿಲ್ಲ. ಸೇವಾಧರ್ಮವನ್ನು ಸರಿಯಾಗಿ ನಡೆಸಿಕೊಂಡು ಬರಲು ಸಮರ್ಥನಾದರೆ ಸುಲಭವಾಗಿಯೇ ಸಂಸಾರ ಬಂಧನವು ಕತ್ತರಿಸಿ ಹೋಗುತ್ತದೆ.-‘ಮುಕ್ತಿಃ ಕರಫಲಾಯತೇ’ ಮುಕ್ತಿಯು ಅಂಗೈನ ನೆಲ್ಲಿಕಾಯಾಗುತ್ತದೆ’ ಎಂದು ತಮ್ಮ ಶಿಷ್ಯ ಬಾಬು ಶರತ್ ಚಂದ್ರ ಚಕ್ರವರ್ತಿಗೆ ಒತ್ತಿ ಹೇಳುತ್ತಾರೆ. ಸೇವೆಯನ್ನೇ ಮುಕ್ತಿಯ ಮಾರ್ಗವಾಗಿ ತೋರಿಸಿದ ಸ್ವಾಮೀಜಿ ಕಾಡಿನಲ್ಲಿದ್ದ, ಎಲೋ ಕೆಲವರಿಗೆ ಮಾತ್ರ ಮೀಸಲಾಗಿದ್ದ, ಪಂಡಿತರ ಗೋಷ್ಠಿಗಳಿಗೆ ಮಾತ್ರ ಸೀಮಿತವಾಗಿದ್ದ ಆ ವೇದಾಂತವನ್ನು ಅನುಷ್ಠಾನಯೋಗ್ಯವನ್ನಾಗಿ ಮಾಡಿ ಎಲ್ಲರಿಗೂ ಅನ್ವಯಿಸುವಂತೆ ಹೊರತಂದರು. ಕಾಡಿನ ವೇದಾಂತ ಈಗ ನಾಡಿನ ಸೇವಾಯೋಗವಾಗಿ ಪರಿಣಮಿಸಿತು. ಆತ್ಮೋದ್ಧಾರ ಹಾಗೂ ಜಗತ್ತಿನ ಹಿತ ಇವೆರಡನ್ನೂ ಸಾಧಿಸುವ ಈ ಮಾರ್ಗವು ಸ್ವಾಮಿ ವಿವೇಕಾನಂದರು ವೇದಾಂತಕ್ಕೆ ನೀಡಿದ ಹೊಸ ವ್ಯಾಖ್ಯಾನ.

ಪಂಚಮಯೋಗ – ಸೇವಾಯೋಗ

ಸಾಧನೆಯ ಅಂಗವಾಗಿ ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ಹಾಗೂ ರಾಜಯೋಗಗಳನ್ನು ನಮ್ಮ ಶಾಸ್ತ್ರಗಳಲ್ಲಿ ಕಾಣುತ್ತೇವೆ. ನಿಷ್ಕಾಮ ಕರ್ಮವನ್ನು ಮಾಡುತ್ತ ಎಲ್ಲ ಕರ್ಮಗಳ ಫಲಾಪೇಕ್ಷೆಯನ್ನು ತ್ಯಜಿಸಿ, ಮಾಡುವ ಕೆಲಸವೆಲ್ಲವೂ ಭಗವದರ್ಪಿತ ಎಂದು ಭಾವಿಸುವುದೇ ಕರ್ಮಯೋಗ. ನಿತ್ಯಾನಿತ್ಯ ವಸ್ತು ವಿವೇಕದಿಂದ ಮಿಥ್ಯಾಕಲ್ಪಿತವಾದ ಎಲ್ಲ ತಪ್ಪುಕಲ್ಪನೆಗಳನ್ನು ತ್ಯಜಿಸಿ, ಆತ್ಮದಲ್ಲಿ ನೆಲೆ ನಿಲ್ಲುವುದೇ ಜ್ಞಾನಯೋಗ, ಭಗವಂತನೊಡನೆ ನವವಿಧಭಕ್ತಿಯ ಭಾವವನ್ನು ಕಲ್ಪಿಸಿಕೊಂಡು ಅರ್ಚನೆ, ಸ್ತುತಿ, ಪೂಜೆ, ಕೀರ್ತನಾದಿಗಳಿಂದ ಅವನ ಪ್ರೀತಿಯನ್ನು ಗಳಿಸಿ ಸಾಯುಜ್ಯ, ಸಾಮೀಪ್ಯಾದಿಗಳನ್ನು ಅನುಭವಿಸುವುದೇ ಭಕ್ತಿಯೋಗ, ಬಾಹ್ಯ ಹಾಗೂ ಅಂತರ್’ಇಂದ್ರಿಯಗಳ ನಿಗ್ರಹದಿಂದ ಮನೋನಿಗ್ರಹವನ್ನು ಸಾಧಿಸಿ, ಚಿತ್ತದ ಏಕಾಗ್ರತೆಯ ಮೂಲಕ ಪ್ರಕೃತಿಗಿಂತ ಭಿನ್ನವಾದ ನಮ್ಮ ನಿಜಸ್ವರೂಪವನ್ನು ಕಂಡುಕೊಳ್ಳುವುದೇ ರಾಜಯೋಗ.

ಈ ಎಲ್ಲ ಯೋಗಗಳನ್ನೂ ಸಮನ್ವಯಗೊಳಿಸುವ ಸೇವಾಯೋಗವನ್ನು ಪ್ರತಿಪಾದಿಸಿದರು ಸ್ವಾಮೀಜಿ. ಹೆಸರು, ಕೀರ್ತಿ ಏನನ್ನೂ ಬಯಸದೆ ಮಾಡುವ ಸೇವೆಯು ಕರ್ಮಯೋಗವೆನಿಸಿಕೊಂಡರೆ, ಎಲ್ಲರಲ್ಲಿಯೂ ಇರುವ ಆ ಒಂದೇ ಆತ್ಮತತ್ತ್ವವನ್ನು ಕಂಡು ಅದರ ಪೂರ್ಣವಿಕಾಸಕ್ಕೆ ಅನುವು ಮಾಡಿಕೊಡುವುದೇ ಜ್ಞಾನಯೋಗದ ಅಂಶವಾಯಿತು. ಪ್ರತಿಯೊಬ್ಬರಲ್ಲಿಯೂ ಅಂತರ್ಯಾಮಿಯಾಗಿರುವ ಭಗವಂತನನ್ನು ಗುರುತಿಸಿ ಮಾಡುವ ಸೇವೆಯೇ ದೇವರಿಗೆ ನಾವು ಸಲ್ಲಿಸಬಹುದಾದ ಕೈಂಕರ್ಯ, ಅರ್ಚನೆಯೆಂದು ಭಾವಿಸುವುದರಿಂದ ಭಕ್ತಿಯೂ ಕೂಡಿಕೊಂಡಿತು. ಪರೋಪಕಾರದಲ್ಲಿ ನಮ್ಮ ಸ್ವಾರ್ಥ, ಅಹಂಕಾರಗಳನ್ನು ನಾಶ ಗೊಳಿಸಿ ತನ್ಮೂಲಕ ಪ್ರಾಕೃತ ಸ್ವಭಾವಗಳಿಂದ ಮುಕ್ತನಾಗಿ ಪುರುಷ ಪ್ರಕೃತಿಗಳು ಬೇರೆ ಬೇರೆ ಎಂದು ತಿಳಿಯುವುದೇ ರಾಜಯೋಗವಾಗುವುದು. ಜೀವಸೇವೆ ಎಂಬುದು ಈ ಎಲ್ಲ ಯೋಗಗಳನ್ನೂ ತನ್ನಲಿ ಒಳಗೊಂಡಿದ್ದು, ಸೇವಾಯೋಗವೇ ಈ ಯುಗಕ್ಕೆ ಅತ್ಯಂತ ಸಮರ್ಪಕವಾದ ಯೋಗ ಎಂದು ಸಾರಿದರು ಸ್ವಾಮೀಜಿ. ಎಲ್ಲ ಯೋಗಗಳ, ಭಾವಗಳ ಐಕ್ಯತೆ ಹಾಗೂ ಪರಹಿತ ಚಿಂತನೆ ಇವುಗಳ ಸಮನ್ವಯವೇ ಈ ಯುಗದ ಧರ್ಮವಾಗಿರುವಾಗ ಸೇವಾಯೋಗವು ಅದಕ್ಕೆ ಸಾಧನವಾಗಬೇಕಲ್ಲವೇ? ಆಧುನಿಕ ಯುಗದಲ್ಲಿ ಯೋಗಸಮನ್ವಯದ ಆವಶ್ಯಕತೆಯನ್ನು ಮನಗಂಡೇ ಅದನ್ನು ಸ್ವಾಮೀಜಿ ರಾಮಕೃಷ್ಣ ಮಹಾಸಂಘದ ಸಾಧನಾ ಪ್ರಣಾಳಿಯ ತಿರುಳನ್ನಾಗಿಸಿರುವುದನ್ನು ನಾವಿಲ್ಲಿ ಗಮನಿಸಬಹುದು.

ಸಮನ್ವಯ ಸಿದ್ಧಾಂತ:

ಸಾಮಾನ್ಯವಾಗಿ ವೇದಾಂತವೆಂದಕೂಡಲೇ ಅದು ಅದ್ವೈತ ವೇದಾಂತವನ್ನೇ ಸೂಚಿಸುತ್ತದೆ ಎಂಬ ಭಾವನೆಯಿದೆ. ವೇದಗಳ ಅಂತ್ಯದಲ್ಲಿರುವ ಉಪನಿಷತ್ತುಗಳ ಸಾರ ಅಥವಾ ವೇದಗಳ ಕೊನೆಯ ಮಾತು ವೇದಾಂತ. ಜೀವ-ಬ್ರಹ್ಮೈಕ್ಯವನ್ನು ಸಾರುವ ತತ್ತ್ವಗಳಿರುವ ಈ ವೇದಾಂತದ ಒಂದು ವ್ಯಾಖ್ಯಾನ ಅದ್ವೈತ ಸಿದ್ಧಾಂತ. ವಿಶಿಷ್ಟಾದ್ವೈತ ಮತ್ತು ದ್ವೈತ ಮತಗಳೂ ಕೂಡ ಈ ತತ್ತ್ವದ ಇತರ ವ್ಯಾಖ್ಯಾನಗಳು, ಸತ್ಯವನ್ನು ತಿಳಿಯುವ ಬೇರೆ ಪ್ರಯತ್ನಗಳು. ಇದರಲ್ಲಿ ಮೇಲುಕೀಳಾಗಲಿ, ಹಿರಿಯ ಕಿರಿಯ ಮತವೆಂದಾಗಲಿ ಭೇದ ಸಲ್ಲದು. ಇದನ್ನು ಪ್ರತಿಪಾದಿಸುವ ಸ್ವಾಮಿ ವಿವೇಕಾನಂದರು ಒಂದು ಸುಂದರ ಉದಾಹರಣೆಯ ಮೂಲಕ ಇದನ್ನು ವಿಶದಪಡಿಸುತ್ತಾರೆ. ನಾವು ಹಲವು ದಿಕ್ಕುಗಳಿಂದ, ಸ್ತರಗಳಿಂದ ಸೂರ್ಯನ ಛಾಯಾಚಿತ್ರವನ್ನು ತೆಗೆದರೆ ಅವುಗಳೆಲ್ಲದರಲ್ಲೂ ಅದೇ ಸೂರ್ಯನ ವಿವಿಧ ಚಿತ್ರಗಳು ಗೋಚರಿಸುವುವು. ಅವು ಭಿನ್ನವಾಗಿ ಕಂಡರೂ ಮೂಲತಃ ಅವುಗಳಲ್ಲಿ ಇರುವ ಸೂರ್ಯ ಒಬ್ಬನೇ. ಅಂತೆಯೇ ದ್ವೈತ, ವಿಶಿಷ್ಟಾದ್ವೈತ ಹಾಗೂ ಅದ್ವೈತಗಳು ಸತ್ಯವನ್ನು ವಿವರಿಸುವ ವಿವಿಧ ವಿವರಣೆಗಳಷ್ಟೆ. ಅವುಗಳಲ್ಲಿ ಯಾವುದೇ ತಾರತಮ್ಯವಿಲ್ಲ. ವಿವೇಕಾನಂದರು ಹೇಳುತ್ತಾರೆ : “ಉಪನಿಷತ್ತುಗಳ ಮೇಲೆ ಅದ್ವೈತಿಗಳಿಗೆ ಇರುವಷ್ಟೇ ಪೂಜ್ಯಭಾವ ವಿಶಿಷ್ಟಾದ್ವೈತಿಗಳಿಗೂ ಇದೆ. ಅದ್ವೈತಿಗಳು ವೇದಾಂತದ ಪ್ರಮಾಣವನ್ನು ಒಪ್ಪಿಕೊಳ್ಳುವಂತೆಯೇ ವಿಶಿಷ್ಟಾದ್ವೈತಿಗಳೂ ಒಪ್ಪಿಕೊಳ್ಳುತ್ತಾರೆ. ದ್ವೈತಿಗಳೂ ಕೂಡ ಹೀಗೆಯೇ… ಕಟ್ಟಾ ದ್ವೈತಿಯಾಗಿರುವಷ್ಟೇ ಅದ್ವೈತಿಯೂ ಆಗಿದ್ದ, ಪರಮ ಭಕ್ತನಾಗಿರುವಷ್ಟೇ ಜ್ಞಾನಿಯೂ ಆಗಿದ್ದ ಒಬ್ಬರೊಂದಿಗೆ ಇರುವ ಭಾಗ್ಯನನ್ನದಾಗಿತ್ತು. ಅವರ ಬಳಿಯಲ್ಲಿ ವಾಸಿಸುತ್ತಿರುವಾಗ ಉಪನಿಷತ್ತು ಮತ್ತು ಇತರ ಶಾಸ್ತ್ರಗಳನ್ನು ಅಧ್ಯಯನ ಮಾಡುವಾಗ ಭಾಷ್ಯಕಾರರನ್ನು ಕುರುಡಾಗಿ ಅನುಸರಿಸದೆ, ಸ್ವತಂತ್ರವಾಗಿ ಬೇರೊಂದು ದೃಷ್ಟಿಯಿಂದ ಅಧ್ಯಯನ ಮಾಡಬೇಕೆಂದು ಎನ್ನಿಸಿತು. ನನ್ನ ಸಂಶೋಧನೆ ಮತ್ತು ಅಭಿಪ್ರಾಯದ ಪ್ರಕಾರ ಈ ಶಾಸ್ತ್ರವಾಕ್ಯಗಳು ಪರಸ್ಪರ ವಿರೋಧವಾಗಿಲ್ಲ. ನನಗೆ ತೋರಿದ ಒಂದು ಭಾವನೆ ಎಂದರೆ ಎಲ್ಲ ಉಪನಿಷತ್ತುಗಳೂ ಉಪಾಸನೆಯ ದ್ವೈತ ಭಾವದಿಂದ ಪ್ರಾರಂಭವಾಗಿ ಪರಮ ಅದ್ವೈತ ಭಾವನೆಯಲ್ಲಿ ಕೊನೆಗಾಣುವುವು.”

ಇತರರಿಗೆ ಸಂತೋಷ ಉಂಟುಮಾಡಿ, ಆನಂದ ಉಂಟುಮಾಡಿ, ನಿಮ್ಮ ಸುಖ ಸಾವಿರಪಟ್ಟಾಗುವುದು. ಪರೋಪಕಾರವೇ ಉಪಾಸನೆ, ಪರೋಪಕಾರವೇ ಪೂಜೆ, ಸೇವೆಯೇ ಭಜನೆ – ಸ್ವಾಮಿ ಶಿವಾನಂದ (ದಿವ್ಯಜೀವನ ಸಂಘ)

ಧರ್ಮಗಳ ಸಮನ್ವಯವನ್ನು ಸಾಧಿಸಿದಂತೆಯೇ ಶ್ರೀರಾಮಕೃಷ್ಣರು ಹಿಂದೂಧರ್ಮದ ಎಲ್ಲ ಮತಗಳ ಸಮನ್ವಯವನ್ನೂ ಸಾಧಿಸಿದ್ದರು. ಇದನ್ನು ಗ್ರಹಿಸುವ ಸಾಮರ್ಥ್ಯ ಸ್ವಾಮೀಜಿಗೆ ಇದ್ದುದರಿಂದ ವೇದಾಂತದ ಈ ಸರಿಯಾದ ಕಲ್ಪನೆಯನ್ನು ಎಲ್ಲೆಡೆ ಸಾರಿದರು. ನಮ್ಮ ಭಾರತೀಯ ಇತಿಹಾಸವನ್ನು ಪರಿಶೀಲಿಸಿದರೆ ಮತಗಳ ಪರಸ್ಪರ ಖಂಡನೆಯಿಂದ ಅದೆಷ್ಟು ವೈಷಮ್ಯ ಬೆಳೆದುಕೊಂಡಿದೆ ಎಂಬುದರ ಆರಿವಾಗುತ್ತದೆ. ತಮ್ಮಲ್ಲೇ ಹೊಡೆದಾಡಿಕೊಂಡು ಪರಸ್ಪರ ನಿಂದೆಯಲ್ಲಿ ತೃಪ್ತಿಪಡುತ್ತಿದ ಪಂಡಿತರಿಗೆ ಹಿಂದೂ ಸಮಾಜದ ಏಳ್ಗೆ ಅಥವಾ ಉದ್ದಾರದ ಕಲ್ಪನೆಯಾದರೂ ಹೇಗೆ ಬಂದೀತು? ಹಿಂದೂಧರ್ಮದ ಎಲ್ಲ ಪಂಗಡಗಳಿಗೂ ಮಾನ್ಯತೆಯನ್ನು ಕೊಟ್ಟು, ಅವೆಲ್ಲವೂ ಭಗವಂತನನ್ನು ಪಡೆಯಲು ಇರುವ ವಿವಿಧ ಮಾರ್ಗಗಳು ಎಂದು ತೋರಿಸಿಕೊಟ್ಟ, ಶ್ರೀರಾಮಕೃಷ್ಣ-ವಿವೇಕಾನಂದರಿಗೆ ಸಮಾಜ ಚಿರಋಣಿಯಾಗಿರಬೇಕು.

ವೇದಾಂತಿಯ ಲಕ್ಷಣಗಳು

ವೇದಾಂತ ಇನ್ನು ಮುಂದೆ ಉಳಿಯಬೇಕಾದರೆ, ಎಲ್ಲರಿಂದಲೂ ಅದು ಸ್ವೀಕೃತವಾಗಬೇಕಾದರೆ  ಅದು ಮೊದಲು ಕಾರ್ಯರೂಪಕ್ಕೆ ಬರಬೇಕು. ವೇದಾಂತವೆಂದರೆ ಕೇವಲ ಶಾಸ್ತ್ರಗಳ ಶ್ರವಣ, ಮನನ, ನಿದಿಧ್ಯಾಸನಗಳಲ್ಲ. ವೇದಾಂತದ ಸತ್ಯಗಳು ನಿತ್ಯಜೀವನದಲ್ಲಿ ಬಳಕೆಗೆ ಬರಬೇಕು. ಇದನ್ನು ಹೇಗೆ ಸಾಧಿಸಬೇಕೆಂದು ಸ್ವಾಮೀಜಿ ಬಹಳವಾಗಿ ಚಿಂತಿಸಿದರು. ಪರಿವ್ರಾಜಕ ಜೀವನದಲ್ಲಿ ಭಾರತದಾದ್ಯಂತ ಸಂಚರಿಸಿ ಎಲ್ಲೆಡೆ ಬಡತನವನ್ನೂ ಅಸಹಾಯಕರಾದ ದರಿದ್ರರನ್ನೂ ಕಂಡರು. ಇದರ ಜೊತೆಜೊತೆಗೆ ಹಿಂದೂಧರ್ಮದ ಅತ್ಯುನ್ನತ ಭಾವನೆಗಳೂ ಇದ್ದವು. ಇವೆರಡರ ಮಧ್ಯೆ ಹೊಂದಾಣಿಕೆಗಾಗಿ ಸ್ವಾಮೀಜಿ ಬಹಳ ದೀರ್ಘವಾಗಿ ಆಲೋಚಿಸಿದರು. “ಸಾಂತ್ವನ ನೀಡದ, ಹಸಿದ ಹೊಟ್ಟೆಗೆ ಆಹಾರ ನೀಡದ ಧರ್ಮ ಧರ್ಮವಲ್ಲ. ಅದರಿಂದ ಯಾವುದೇ ಪ್ರಯೋಜನವಿಲ್ಲ” ಎಂಬುದು ಅವರ ಧೀರ ನುಡಿ. ಅವರಿಗೆ ವೇದಾಂತದ ಹೊಸ ವ್ಯಾಖ್ಯಾನದಲ್ಲಿ ಪರಿಹಾರ ಕಂಡಿತು. “ಹೃದಯವಂತಿಕೆ, ವಿಚಾರಶಕ್ತಿ ಮತ್ತು ಕಾರ್ಯತತ್ಪರತೆ ಈ ಮೂರು ಒಂದೇ ಸಮವಾಗಿ ಯಾರಲ್ಲಿ ಪಕ್ವತೆಯನ್ನು ಹೊಂದಿದೆಯೋ ಅಂತಹ ವ್ಯಕ್ತಿಯನ್ನು ನೋಡಲು ಬಯಸುತ್ತೇನೆ. ಈ ಪ್ರಪಂಚದ ಕಷ್ಟ ದುಃಖಗಳನ್ನು ಹೃತ್ಪೂರ್ವಕವಾಗಿ ಅನುಭವಿಸಬಲ್ಲಂತಹ ವ್ಯಕ್ತಿ ನಮಗೆ ಬೇಕು. ಕೇವಲ ಇವುಗಳನ್ನು ಅನುಭವಿಸಬಲ್ಲ ವ್ಯಕ್ತಿ ಮಾತ್ರವಲ್ಲ, ವಸ್ತುವಿನ ಅಂತರಾಳಕ್ಕೆ ಪ್ರವೇಶಿಸಿ, ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂಥವನೂ ನಮಗೆ ಬೇಕು. ಅವನು ಇಲ್ಲಿಯೂ ನಿಲ್ಲಕೂಡದು. ತಾನು ಏನನ್ನು ಅನುಭವಿಸಿರುವನೋ, ಏನನ್ನು ತಿಳಿದುಕೊಂಡಿರುವನೋ ಅದನ್ನು ಕಾರ್ಯಗತಗೊಳಿಸಬಲ್ಲ ವ್ಯಕ್ತಿಯೂ ಆಗಿರಬೇಕು. ಇಂತಹ ಭಾವ, ಯುಕ್ತಿ ಮತ್ತು ಕ್ರಿಯಾಶೀಲತೆಯೆ ಸಾಮರಸ್ಯ ನಮಗೆ ಬೇಕು ” ಎನ್ನುತ್ತಾರೆ ಸ್ವಾಮೀಜಿ.

ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಸ್ವಾಮೀಜಿ ಭಕ್ತಿ, ಜ್ಞಾನ, ಕರ್ಮಯೋಗಗಳ ಸಮನ್ವಯವನ್ನು ಸಾರುತ್ತಿದ್ದಾರೆ ಎಂಬುದು. ಈ ಎಲ್ಲ ಮಾರ್ಗಗಳ ಸಮನ್ವಯದಿಂದ ಮಾತ್ರ ವೇದಾಂತ ಅನುಷ್ಠಾನಯೋಗ್ಯವಾಗಬಲ್ಲದು. ಜ್ಞಾನಮಾರ್ಗ ಅನುಸರಿಸುವವರು ಮಾತ್ರ ವೇದಾಂತಿಗಳೆಂಬ ಭಾವನೆ ಇಲ್ಲಿ ಇಲ್ಲ. ಇಂತಹ ಸಮನ್ವಯ ಸಾಧ್ಯವೇ? ಇದೇ ಭವಿಷ್ಯದ ವೇದಾಂತದ ಸ್ವರೂಪ ಎಂದು ಸ್ವಾಮೀಜಿ ಸಾರುತ್ತಾರೆ, “ಕ್ರಿಯಾಶೀಲನೂ, ಅಷ್ಟೇ ವಿಚಾರವೇತ್ತನೂ ಮತ್ತು ಭಕ್ತನೂ ಆಗಿರುವ ಮೇರುಸದೃಶ ವ್ಯಕ್ತಿಯನ್ನು ನಾವು ಏತಕ್ಕೆ ಪಡೆಯಬಾರದು? ಇದೇನು ಅಸಾಧ್ಯವೆ? ನಿಜವಾಗಿಯೂ ಅಲ್ಲ. ಅವನೇ ಭವಿಷ್ಯತ್ತಿನ ಮಾನವ. ಸದ್ಯಕ್ಕೆ ಅಂಥವರ ಸಂಖ್ಯೆ ವಿರಳವಾದರೂ ಮುಂದೊಂದು ದಿನ ಜಗತ್ತು ಅಂಥವರಿಂದ ತುಂಬಿ ತುಳುಕುವುದರಲ್ಲಿ ಸಂದೇಹವಿಲ್ಲ.”

ತತ್ ತ್ವಮ್ ಅಸಿ

ಉಪನಿಷತ್ತಿನಲ್ಲಿ ಬರುವ ಈ ಮಹಾವಾಕ್ಯವನ್ನು ಎಲ್ಲ ಆಚಾರ್ಯರೂ ತಮ್ಮ ತಮ್ಮ ಸಿದ್ಧಾಂತವನ್ನು ಮಂಡಿಸುವುದಕ್ಕಾಗಿ ಬಳಸಿಕೊಂಡಿದ್ದಾರೆ. ಉಪಾಧಿರಹಿತನಾದ ಜೀವ ಹಾಗೂ ಈಶ್ವರ ಒಂದೇ ಪರಬ್ರಹ್ಮ ವಸ್ತು ಎಂದು ಈ ವಾಕ್ಯ ಸಾರುತ್ತದೆ. ಇಂಥ ವಾಕ್ಯಗಳ ಅರ್ಥನಿರ್ಣಯದಲ್ಲಿ ತರ್ಕವಿಚಾರಗಳ ಬಳಕೆ ಅಗತ್ಯವೆಂದೇ ಭಾವಿಸಿದ್ದ ಜನರಿಗೆ, “ಪ್ರತಿಯೊಂದು ಆತ್ಮವೂ ಸ್ವಭಾವತಃ ಪವಿತ್ರ. ನಮ್ಮಲ್ಲಿ ಅಂತರ್ನಿಹಿತವಾಗಿರುವ ಈ ದಿವ್ಯತೆಯನ್ನು ಪ್ರಕಾಶಗೊಳಿಸುವುದೇ ಧರ್ಮ ಅಥವಾ ಆಧ್ಯಾತ್ಮಿಕತೆ” ಎಂದು ಸ್ವಾಮೀಜಿ ಹೇಳುತ್ತಾರೆ. ಅಜ್ಞಾನದ ಬಲದಿಂದ ಈ ಜೀವ ತಾನು ಅಲ್ಪ, ಕ್ಷುದ್ರನೆಂದು ಭಾವಿಸಿಕೊಳ್ಳುತ್ತಾನೆ. ಆದರೆ ಜ್ಞಾನ, ಭಕ್ತಿ, ಕರ್ಮ ಅಥವಾ ರಾಜಯೋಗಗಳ ಸಾಧನೆಯ ಮೂಲಕ ಆ ಸುಪ್ತ ಚೇತನ ಜಾಗೃತವಾದಾಗ ಮಾನವ ಪೂರ್ಣತ್ವವನ್ನು ಪಡೆಯುತ್ತಾನೆ, ದಿವ್ಯನಾಗುತ್ತಾನೆ. ಈ ಸರಳವಾದ ವ್ಯಾಖ್ಯಾನ ಮನುಷ್ಯನಿಗೆ ತನ್ನಲ್ಲಿರುವ ಅನಂತ ಶಕ್ತಿಯ ಸಾಮರ್ಥ್ಯದ ಪರಿಚಯ ನೀಡಿ ಹೊಸ ಭರವಸೆ, ಹೊಸ ವ್ಯಕ್ತಿಪ್ರಜ್ಞೆಯನ್ನು ನೀಡುತ್ತದೆ. ವೇದಾಂತದ ತತ್ತ್ವವನ್ನು ಅದೆಷ್ಟು ಸರಳವಾಗಿ ಅರ್ಥೈಸಿದ್ದಾರೆ ಸ್ವಾಮೀಜಿ!

ಶ್ರೀರಾಮಕೃಷ್ಣರ ಕೃಪೆಯಿಂದ ಮತ್ತು ಸ್ವಂತ ಅನುಭವದಿಂದ, ಇದಕ್ಕಿಂತಲೂ ಮಿಗಿಲಾಗಿ ತಮಗಿದ್ದ ಅಗಾಧವಾದ ಇತಿಹಾಸ ಪ್ರಜ್ಞೆಯಿಂದ ಹಾಗೂ ಅಪ್ರತಿಮವಾದ ಹರಿತವಾದ ಬುದ್ಧಿಯಿಂದ ಸ್ವಾಮಿ ವಿವೇಕಾನಂದರು ಈ ನವವೇದಾಂತವನ್ನು ನವಯುಗ ಧರ್ಮವನ್ನು ನಮಗೆ ನೀಡಿದ್ದಾರೆ. ಇದು ನಮಗೆ ಅವರು ಬಳುವಳಿಯಾಗಿ ನೀಡಿರುವ ಮುಕ್ತಿಮಾರ್ಗ. ಸ್ವಾಮೀಜಿ, “ಜನಸಾಮಾನ್ಯರು ವೇದಾಂತದ ಸಂದೇಶದಂತೆ ಬಾಳುವುದನ್ನು ಈ ಹೊಸ ಯುಗವು ನೋಡಬೇಕು” ಎನ್ನುತ್ತಿದ್ದರು.